ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಹಾಗೂ ಬಾಲಕಲಾವಿದರ ಯಕ್ಷ ಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು, ಈ ಉಭಯ ತರಬೇತಿ ಕೇಂದ್ರದ ದಶಮಾನೋತ್ಸವ ಸಂಭ್ರಮವು ದಿನಾಂಕ 05/05/2025 ರಿಂದ 11/05/2025 ರ ವರೆಗೆ ಅಡ್ಕ ಶ್ರೀ ಭಗವತಿ ಕೃಪಾ ವಿರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ ಅಡ್ಕ, ಪರಿಸರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಏಳು ದಿವಸವೂ ಸುಪ್ರಸಿದ್ಧ ಮಹಿಳಾ ಕಲಾವಿದರಿಂದ ತಾಳಮದ್ದಳೆ, ಹಾಗೂ ವಿವಿಧ ಬಾಲಕಲಾವಿದರ ತಂಡಗಳಿಂದ ಯಕ್ಷಗಾನ ಬಯಲಾಟವೂ ಜರಗಿತು.

ದಿನಾಂಕ 05/11/2025 ರಂದು ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಪ್ರಜ್ವಲಿಸಿ ಉದ್ಘಾಟನೆಗೈದರು. ತಾಳಮದ್ದಳೆ ಕ್ರಮವಾಗಿ ಶ್ರೀರಾಮ ಪಟ್ಟಾಭಿಷೇಕ, ವಾಲಿಮೋಕ್ಷ ,ದಕ್ಷ ಯಜ್ಞ, ಗರುಡ ಗರ್ವಭಂಗ, ಕೃಷ್ಣ ಸಂಧಾನ, ಕರ್ಣಾರ್ಜುನ ಕಾಳಗ, ಗದಾಯುದ್ಧ, ಹಾಗೂ ಬಯಲಾಟಗಳು ಕ್ರಮವಾಗಿ ಪ್ರಮೀಳಾರ್ಜುನ ಕಾಳಗ, ನರಕಾಸುರ ಮೋಕ್ಷ, ಭಕ್ತ ಸುಧನ್ವ, ಸುದರ್ಶನ ವಿಜಯ, ಬಬ್ರುವಾಹನ ಕಾಳಗ, ಕೃಷ್ಣ ಲೀಲೆ ಕಂಸ ವಧೆ ಹಾಗೂ ಹಾಗೂ ಶ್ರೀ ದೇವಿ ಮಹಾತ್ಮೆ ಪ್ರದರ್ಶನಗೊಂಡಿತು. ದಿನಾಂಕ 11/05/2025 ರಂದು ನಡೆದ ಸಮಾರೋಪ ಸಮಾರಂಭವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.



ಹಿರಿಯ ಕಲಾವಿದರಾದ ಶ್ರೀ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷ ಕಯ್ಯಾರು ಪ್ರಶಸ್ತಿ, ಹಾಗೂ ಹಿರಿಯ ಪ್ರಸಾದನ ಕಲಾವಿದರಾದ ಎಮ್ಮೋಜಿ ಯಾನೆ ಸುಧಾಕರ ಕಾಸರಗೋಡು, ಇವರಿಗೆ ಗೌರವಾರ್ಪಣೆ, ಹಾಗೆಯೇ ಹಿರಿಯ ಹಿಮ್ಮೇಳ ಕಲಾವಿದರಾದ, ಶಿವರಾಮ ಆಚಾರ್ಯ ಧರ್ಮತ್ತಡ್ಕ, ಹರೀಶ್ ಪಂಜತ್ತೊಟ್ಟಿ, ವಾಸುದೇವ ಕಲ್ಲೂರಾಯ, ಕೇಶವ ಪ್ರಸಾದ ಶಿರಂತಡ್ಕ ಮತ್ತು ಸತೀಶ್ ಶೆಟ್ಟಿ ಬಾಯಾರು ಸನ್ಮಾನಿತಗೊಂಡರು. ಅದೇ ರೀತಿ ಮಹಿಳಾ ಯಕ್ಷಕೂಟದ ಎಲ್ಲಾ ಸದಸ್ಯರಿಗೆ ಹಾಗೂ ಬಾಲ ಕಲಾವಿದನಾದ ಮನೀಶ್ ಧರ್ಮತಡ್ಕ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತೀ ದಿನ ಸಾಯಂಕಾಲ ಸಭಾಕಾರ್ಯಕ್ರಮವನ್ನು ಏರ್ಪಡಿಸಿದ್ದು, ಊರ ಹಾಗೂ ಪರವೂರ ಗಣ್ಯಾತಿ ಗಣ್ಯರು ಪಾಲ್ಗೊಂಡಿದ್ದರು.