ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ; ವಿಜ್ಞಾಪನಾ ಪತ್ರ

ದಾರುಮತಿಯ ಮಗನಾದ ದಾನವ ದಾರಿಗಾಸುರರನ್ನು ಸಂಹರಿಸಲು ತ್ರಿಮೂರ್ತಿಗಳಿಂದಲೂ, ದೇವತೆಗಳಿಂದಲೂ ಅಸಾಧ್ಯವೆನಿಸಿದಾಗ ಚಿಂತಿತನಾದ ಪರಮೇಶ್ವರನ ನೇತ್ರಬಿಂದುವಿನಿಂದ ತೊಡೆಯಲ್ಲಿ ಕುರುವಾಗಿ ಉದ್ಭವಿಸಿದವಳು ಭದ್ರಕಾಳಿ, ಬ್ರಾಹ್ಮ, ವೈಷ್ಣವಿ, ಮಾಹೇಶ್ವರೀ, ಇಂದ್ರಾಣಿ, ಕೌಮಾರಿ, ವಾರಾಹಿ ಷಟ್‌ಕನ್ನಿಕೆಯರು ಅಸುರನೊಂದಿಗೆ ಯುದ್ಧಗೈದು ಸೋತು ಹಿಂದಿರುಗಿದಾಗ, ಭದ್ರಕಾಳಿಯು ಈ ಷಟ್ ಕನ್ನಿಕೆಯರನ್ನು ಹಾಗೂ ಆದಿ ವೇದಾಳ(ಗುಳಿಗ)ನನ್ನು ಸೇರಿಕೊಂಡು ರಾಕ್ಷಸನೊಂದಿಗೆ ಸಮರಗೈಯುತ್ತಾಳೆ. ನಾನಾ ರೂಪಗಳಿಂದ ಆಕೆಯನ್ನು ವಂಚಿಸಿ ತಪ್ಪಿಸಿಕೊಳ್ಳುತ್ತಾ, ಸಾವಿರದ ಒಂದನೇ ಅವತಾರದಲ್ಲಿ ಶ್ವೇತ ಕುಕ್ಕುಟವಾಗಿ ಪಾತಾಳದಲ್ಲಿ ಅಡಗಿರಲು ಅಲ್ಲಿಂದ ಹಿಡಿದು ತಂದು ಸಂಹರಿಸಿದಳು. ಅವಳ ಕೋಪವು ಶಮನವಾದಂತೆ ಕೈಲಾಸದಲ್ಲಿರಿಸಿಕೊಳ್ಳುವುದು ಆಪತ್ತು ಎಂದು ಅರಿತ ರುಂಡಮಾಲಾಧಾರಿಯು ಅವಳನ್ನು ಭೂಮಿಗೆ ಕಳುಹಿಸಿಕೊಡುವ ಮನ ಮಾಡುತ್ತಾನೆ. ದಂಡರಾಜ, ಘಂಟಾಕರ್ಣ, ಆದಿವೇದಾಳರೊಂದಿಗೆ ಷಟ್‌ಕನ್ನಿಕೆಯರು ಭೂಮಿಗಿಳಿದು ಬಂದರು, ಶ್ರೀಗಂಧ ವೃಕ್ಷದ ನಾವೆ ನಿರ್ಮಾಣದ ಕಥೆ, ದಾರುಮತಿಯ ಶಾಪ, ಪಾಂಡ್ಯರಾಜ, ನೀಲಕಂಠರ ಕಥಾನಕ, ಜಲದುರ್ಗೆಯ ಸಮಾಗಮ, ಶಂಖಪಾಲನ ಮರ್ಧನ ಹೀಗೆ ವಿಸ್ತರಿಸುತ್ತಾ ಹೋದಂತೆ ಭಗವತಿಯ ಪೂರ್ವಚರಿತ್ರೆ ರಮ್ಯ ರೋಚಕವೆನಿಸುತ್ತದೆ.

ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಡಲ ತಡಿಯಲ್ಲಿರುವ “ಸಸಿಹಿತ್ತು ಶ್ರೀ ಭಗವತೀ ದೇವಸ್ಥಾನ” ತುಳುನಾಡಿನ ಒಂದು ಇತಿಹಾಸ ಪ್ರಸಿದ್ದ ಕಾರಣೀಕ ಕ್ಷೇತ್ರ. ಸುಮಾರು 900 ವರ್ಷಗಳಷ್ಟು ಹಳೆಯದೆಂದು ವಿವಿಧ ಆಧಾರಗಳಿಂದ ಇದರ ಕಾಲ ನಿರ್ಣಯ ಮಾಡಲಾಗಿದೆ. ಶ್ರೀ ನಂದನೇಶ್ವರ ದೇಗುಲದಲ್ಲಿದ್ದ ‘ಚಿತ್ರಾಪುರದ ಬಯಲಲ್ಲಿ’ ಎಂಬ ಶಿಲಾ ಶಾಸನದಲ್ಲಿ ಸಸಿಹಿತ್ಲು ಭಗವತಿಯ ಹೆಸರು ಕ್ರಿ.ಶ. 1332ರಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ದ.ಕ ಜಿಲ್ಲೆಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಡಾ। ಗುರುರಾಜ ಭಟ್ಟರ ಸಂಶೋಧನಾ ಗ್ರಂಥ ಇದಕ್ಕೆ ಪುಷ್ಠಿ ನೀಡುತ್ತದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ಅಂದಿನ ಸ್ತಂಭ ಶಾಸನದಲ್ಲಿ ಸಪ್ತ ಮಾತೃಕೆಯರನ್ನು ಕೆತ್ತಲಾಗಿರುವುದನ್ನು ಇತಿಹಾಸ ತಜ್ಞ ಡಾ। ವಸಂತ ಮಾಧವರವರು, ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಸುದಿಪು ಆಲಿಸುತ್ತಿದ್ದಂತೆ ಭಗವತೀ ಆವೇಶಗೊಳ್ಳುತ್ತಾಳೆ ಎನ್ನುವುದಕ್ಕೆ ಪಂಪನೇ ತನ್ನ ಭಾರತ ಕೃತಿಯ 16ನೇ ಆಶ್ವಾಸದ 16ನೇ ವೃತ್ತದಲ್ಲಿ “ಭಗವತಿಯೇರುವೇಳ್ವ ತೆರದಿಂ” ಎಂದು ಉದಾಹರಿಸಿದ್ದಾರೆ. ಸಸಿಹಿತ್ತು ಶ್ರೀ ಚೀರುಂಭ ಭಗವತಿಯ ಮೂಲ ಸ್ಥಳ ಕೇರಳ ರಾಜ್ಯದ ಕೊಡಂಗಲ್ಲೂರು ಎಂಬುದನ್ನು ಸ್ಪಷ್ಟಿಕರಿಸಲಾಗಿದ್ದು, ಸ್ವರ್ಣ ಪ್ರಶ್ನೆಯ ಪ್ರಾಯಶ್ಚಿತ್ತ ಪರಿಹಾರಾದಿಗಳಲ್ಲಿ ಅಲ್ಲಿಗೆ ಸೇವೆ ಸಂದಾಯ ಮಾಡಲಾಗಿದೆ. ಸಂಶೋಧನಾ ಸಾಹಿತ್ಯ ಕೇರಳದ ತೆಯ್ಯಂ, ಭಗವತೀ ಆರಾಧನೆ, ದಾರುಕಾವಧಂ, ಕಾಳಿ ನಾಟಕಗಳು, ತಾಳೆಗರಿ ಗ್ರಂಥಗಳು ಭಗವತಿಯ ಮಹಿಮಾ ಶಕ್ತಿಯನ್ನು ಕೊಂಡಾಡಿವೆ. ತಮಿಳು “ಸಂಘಂ ಸಾಹಿತ್ಯ” ಕಾಲದ ಪ್ರಾಚೀನ ತಮಿಳು ಸಾಹಿತ್ಯ ಶಿಲಪ್ಪದಿಕಾರಂ, ಮಣಿ ಮೇಖಲೈ ಎಂಬ ತಮಿಳು ಸಾಹಿತ್ಯ ಕೃತಿಗಳು ಭಗವತಿಯ ಪೂರ್ವ ಚರಿತ್ರೆಗೆ ಸಾಕ್ಷಿಯಾಗಿ ನಿಂತಿವೆ.

ಅರುಣಾಸುರನನ್ನು ಸಂಹರಿಸಿ ಭ್ರಮರಾಂಬಿಕೆಯಾದಳು, ದಾರಿಗಾಸುರನನ್ನು ಕೊಂದು ಭದ್ರಕಾಳಿಯಾದಳು, ಕೈಲಾಸದಿಂದ ಸಪ್ತ ಮಾತೃಕೆಯರು ಭೂಮಿಗಿಳಿದ ಮೇಲೆ ನೂರೊಂದು ಹೆಸರುಗಳಿಂದ ಅಲ್ಲಲ್ಲಿ ನೆಲೆಯಾದರು, ಭದ್ರಕಾಳಿಯು “ಕನ್ನಗಿ” ಎಂಬ ನಾಮದಿಂದ ಮಾನವ ರೂಪವನ್ನು ತಳೆದು ಶಾಪ ನಿಮಿತ್ತ ಭೂಮಿಯಲ್ಲಿ ಮಾನವನಾಗಿ ಹುಟ್ಟಿದ ಯಕ್ಷ ಕೋವಲನನ್ನು ವಿವಾಹವಾಗಿ, ಕಾಲ್ಗಡಗದ ಘಟನೆಯಿಂದ ಸಿಡಿದೆದ್ದು ಸತ್ಯದ ಪಥವೇನೆಂದು ಲೋಕವರಿಯುವಂತೆ ಮಧುರಾ ಪಟ್ಟಣವನ್ನು ಲಯ ಮಾಡಿ, ಪಾಂಡ್ಯ ಚೇರರ ಕಾಲದಲ್ಲಿ ಕೇರಳದ ಕೊಡಂಗಲ್ಲೂರಿನಲ್ಲಿ ರೌದ್ರ ರೂಪದಲ್ಲಿ ಸ್ಥಿರವಾಗಿ ನಿಂತಳು. ಅಲ್ಲಿ ಅಮ್ಮನಾಗಿ ನೆಲೆ ನಿಂತು ಅಲ್ಲಲ್ಲಿ ಲೀಲೆಗಳನ್ನು ತೋರಿಸಿ, ಕಾಸರಗೋಡಿನ ತಲಂಗರೆಯಲ್ಲಿ ನೆಲೆಯಾಗಿ ಮುಂದೆ ಸಸಿಹಿತ್ತಿನಲ್ಲಿ ಪದ್ಮಾಸನಸ್ಥೆಯಾದಳು, ಚೀರುಂಭ ನಾಲ್ವರು ಎಂಬ ಅಭಿದಾನವನ್ನು ಪಡೆದ ಭಗವತಿಯು ಏಕದಾರು ಪೀಠದಲ್ಲಿ ಪ್ರಸನ್ನಳಾಗಿ ಕುಳಿತು ತನ್ನ ಎಡಭಾಗದಲ್ಲಿ ದಂಡರಾಜನನ್ನು, ಬಲ ಭಾಗದಲ್ಲಿ ಎಳೆಯ ಭಗವತಿ (ದುರ್ಗೆ), ಅವಳ ಬಲ ಭಾಗದಲ್ಲಿ ಘಂಟಾಕರ್ಣನನ್ನೂ ಕುಳ್ಳಿರಿಸಿ ಅಭಯವನ್ನಿತ್ತು ನಿತ್ಯವೂ ಹರಸುತ್ತಿರುವಳು. ಬಿಸಿ ಮರಳಿನ ಮೇಲೆ ಚಿರಕಾಲದಿಂದ ರೆಂಬೆಗಳನ್ನು ಪಸರಿಸಿ ನೆರಳನ್ನೀಯುವ ಆಲದ ಮರದಡಿಯ ತಂಪು ನೆರಳಲ್ಲಿ ಅಂದು ಭಕ್ತನು ಭಕ್ತಿಯಿಂದ ಕೊಟ್ಟ ಎಳನೀರನ್ನು ಕುಡಿದು ಸಂತುಷ್ಟಳಾದ ಅಮ್ಮ, ನಿನ್ನಿಂದ ಉತ್ತರೋತ್ತರ ಸೇವೆಯನ್ನು ಸ್ವೀಕರಿಸುವೆನೆಂದು ಹರಸಿದಳು. ಸ್ಥಳ ದೈವವಾಗಿ ಧೂಮಾವತಿಯೂ, ಕ್ಷೇತ್ರಪಾಲನಾಗಿ ಜೊತೆಗೂಡಿ ಬಂದ ಗುಳಿಗನೂ, ನಿತ್ಯ ಧೂಪ-ದೀಪಗಳಿಂದ ತೃಪ್ತರಾಗಿರುವರು. ಕಾರ್ನವರ ಸ್ಥಾನವನ್ನಲಂಕರಿಸಿದ್ದವರಲ್ಲಿ ನಮಗೆ ನಾಲ್ಕು ತಲೆಮಾರುಗಳ ಹೆಸರು ಉಳಿದಿದ್ದರೂ ಪೂರ್ವದಲ್ಲಿ ಮರೆಯಾಗಿ ಹೋದವರು ಬಹುಮಂದಿ ಇದ್ದರು ಎಂಬುದನ್ನು ತಿಳಿಯಪಡಿಸುತ್ತದೆ.

ಗುಡಿಯೊಂದು ದೇಗುಲವಾಗಿ ಪರಿವರ್ತನೆಯಾಗಬೇಕಾದರೆ ಭಕ್ತರ ಮನದಲ್ಲಿ ಮನೆ ಮಾಡಿದ ಭಕ್ತ ವತ್ಸಲೆಯ ಪ್ರಭಾವವೇ ಕಾರಣ, ಅಲ್ಲಿ ಪೀಠವೇ ಪ್ರಧಾನವಾಗಿ, ಮರಳೇ ಪ್ರಸಾದವಾಗಿ, ಬರೀ ಪ್ರಾರ್ಥನೆಗೆ ಅನುಗ್ರಹದ ಪ್ರಸಾದವನ್ನಿತ್ತ ತಾಯಿಯ ಮಹಿಮೆಯ ರೋಚಕ ಕಥೆಗಳನ್ನು ಇಂದಿಗೂ ಕೊಂಡಾಡುವ ಬಹುಮಂದಿ ಹಿರಿಯರಿದ್ದಾರೆ. ಭದ್ರಕಾಳಿಯ ರೌದ್ರ ರೂಪವನ್ನು ಕಳೆದು, ಭಗವತಿಯ ಶಾಂತ ರೂಪವನ್ನು ತಳೆದು ಅಭಯ ನೀಡುತ್ತಾಳೆ ಎಂಬುದನ್ನು ಹೇಳುವುದಕ್ಕೆ ಸಂಕೋಚವೇ ಬೇಡ. 1995ರಲ್ಲಿ ದೇವಸ್ಥಾನದ ರೂಪವನ್ನು ಪಡೆದು ನಿತ್ಯ ಪೂಜಾ ದೇವಸ್ಥಾನವೆಂದು ಕರೆಯಲ್ಪಟ್ಟು, 2009ರಲ್ಲಿ ಭಂಡಾರ ಮಂದಿರದ ಅಭಿವೃದ್ಧಿ ಕಾರ್ಯಗಳು ನಡೆದು, 2014ರಲ್ಲಿ ಮತ್ತೆ ದೇವಸ್ಥಾನದ ವಿನ್ಯಾಸದಲ್ಲಿ ಅನೇಕ ಪರಿವರ್ತನೆಗಳಾಗಿ ಇಂದು ಭಗವತಿಯು ಪರಿಪೂರ್ಣ ಸಂತುಷ್ಠೆಯಾಗಿದ್ದಾಳೆ ಎಂಬುದನ್ನು ಮುಂಬರುವ ಬ್ರಹ್ಮಕಲಶದ ಮೊದಲು ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಳ್ಳಲಾಯಿತು.
2026 ಮಾರ್ಚ್ ತಿಂಗಳ 4ನೇ ತಾರೀಖಿನಿಂದ 8ನೇ ತಾರೀಖಿನವರೆಗೆ ಇಲ್ಲಿ ಬ್ರಹ್ಮಕಲಶೋತ್ಸವದ ದಿನ ನಿಗದಿಯಾಗಿದೆ. ಸ್ಥಿರವಾದ ಪೀಠದಲ್ಲಿ ಚೀರುಂಭನಾಲ್ವರು ಸುಪ್ರಸನ್ನರಾಗಿದ್ದು ಹೊರ ಭಾಗದಲ್ಲಿರುವ ಧೂಮಾವತಿ, ಗುಳಿಗ ಸಾನಿಧ್ಯಗಳು ಶಕ್ತಿಯುತವಾಗಿರುವುದನ್ನು ಪ್ರಶ್ನಾಂತ್ಯದಲ್ಲಿ ಗಮನಕ್ಕೆ ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ, ಸಂದರ್ಶಕರ ಸಂಖ್ಯೆ ಅಧಿಕವಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಗಳು ನಮ್ಮ ಮನವನ್ನೇ ಕೊರೆಯುತ್ತವೆ, ಉದಾರ ಹೃದಯಗಳು ಮತ್ತು ದಾನ ಗುಣ ಶೀಲರಾದ ಊರ ಪರವೂರುಗಳಲ್ಲಿ ನೆಲೆಸಿರುವವರ ಅನೇಕ ತರಹದ ಕೊಡುಗೆಗಳಿಂದ ನಮ್ಮ ದೇವಸ್ಥಾನ ಬೆಳಗಿದೆ, ಬೆಳಗುತ್ತಿದೆ.
ಸುಪ್ರಸನ್ನಳಾಗಿರುವ ತಾಯಿ ಭಗವತಿಯ ಪ್ರಭೆಗೆ ಇಂದು ಈ ಪ್ರಾಂಗಣ ಬಲು ಚಿಕ್ಕದಾಗಿದೆ ಎಂಬುದನ್ನು ಆಗಮ ಶಾಸ್ತ್ರಜ್ಞರು ಈ ಹಿಂದೆಯೇ ತಿಳಿಸಿದ್ದರೂ, ಧಾರ್ಮಿಕ ಚಿಂತಕರು ಸ್ವಯಂ ಅನುಭವಿಸಿದ್ದನ್ನು ಅದ್ಭುತವೆಂದು ಪ್ರಶಂಶಿಸಿರುತ್ತಾರೆ. ಅಷ್ಟೊಂದು ಶಕ್ತಿಯುತ ಶಕ್ತಿದೇವತೆಯ ನೆಲೆಯಾಗಿದೆ. ಇಲ್ಲಿ ಕೊಡುವ ಹಳದಿ ಪ್ರಸಾದದಲ್ಲಿ ಅಪರಿಮಿತ ಸುಖವನ್ನು ಅನುಭವಿಸಿದ ಅನೇಕ ಮುಖಗಳಿವೆ, ಅಂದಿನ ಅನುಕೂಲತೆಯನ್ನು ನೋಡಿ ದೇಗುಲದ ನಿರ್ಮಾಣವಾಗಿದ್ದರೂ, ಇಂದಿನ ಅವಶ್ಯಕತೆಗಳು ಅನೇಕವಾಗಿದ್ದು ಅವುಗಳಲ್ಲಿ ಕೆಲವನ್ನು ಈ ಬ್ರಹ್ಮಕಲಶದ ಪೂರ್ವದಲ್ಲಿ ಭಕ್ತರ ಸನ್ನಿಧಿಗೆ ಸಮರ್ಪಿಸುತ್ತಿದ್ದೇವೆ.

- ದೇವಸ್ಥಾನದ ಪ್ರಧಾನ ಗೋಪುರದ ನಿರ್ಮಾಣ.
- ಹಳೆಯಂಗಡಿ ಮತ್ತು ಮುಕ್ಕದಲ್ಲಿ 2 ಮಹಾದ್ವಾರಗಳ ನಿರ್ಮಾಣ.
- ಊರ-ಪರವೂರ ಪ್ರದೇಶಗಳಿಂದ ಬರುವ ಭಕ್ತರಿಗೆ ತಂಗುವುದಕ್ಕೆ ವಸತಿಗೃಹದ ನಿರ್ಮಾಣ.
- ಅಭಿವೃದ್ಧಿ ಯೋಜನೆಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳವೊಂದರ ಖರೀದಿ.
- ದೇವಸ್ಥಾನದ ಪರಿಧಿಯೊಳಗೆ ಆವರಣಗೋಡೆ ನಿರ್ಮಾಣ.
- ಅಶ್ವತ್ಥ ಕಟ್ಟೆಯ ನಿರ್ಮಾಣ.
- ಅರ್ಚಕರು ಹಾಗೂ ಆಚಾರಪಟ್ಟವರಿಗೆ ಸ್ನಾನ ಗೃಹ ನಿರ್ಮಾಣ.
- ನವರಾತ್ರಿ, ನಡಾವಳಿ, ಪ್ರತಿಷ್ಠಾ ವರ್ಧಂತಿ, ಬ್ರಹ್ಮಕಲಶ ಉತ್ಸವಕ್ಕೆ ಬೇಕಾಗುವ ದೊಡ್ಡ ಅಡುಗೆ ಪಾತ್ರೆಗಳ ಖರೀದಿ.
- ಪಾತ್ರೆ ಪಗಡೆಗಳನ್ನಿಡುವುದಕ್ಕೆ ಪ್ರತ್ಯೇಕ ಕೊಠಡಿಯೊಂದರ ನಿರ್ಮಾಣ.
- ಬ್ರಹ್ಮಕಲಶ ಸಂದರ್ಭದಲ್ಲಿ ಸಂಪೂರ್ಣ ಪೈಂಟಿಂಗ್, ದುರಸ್ಥಿ.
- ಪಾಕಶಾಲೆಯ ದುರಸ್ತಿ ಕಾರ್ಯ.
- ನಡಾವಳಿ, ಬ್ರಹ್ಮಕಲಶ, ಭರಣಿ ಮಹೋತ್ಸವದ ಖರ್ಚುಗಳು.
- ನೂತನ ಧ್ವಜ ಸ್ತಂಭ ನಿರ್ಮಾಣ.
- ದೇವಸ್ಥಾನದ ಗರ್ಭ ಗುಡಿ ಮತ್ತು ದಂಡರಾಜನ ಗುಡಿ ನವೀಕರಣ ಕಾರ್ಯ.
- ಗರ್ಭಗುಡಿಯ ಒಳಗೆ ಮತ್ತು ಹೊರಗೆ ಹಿತ್ತಾಳೆ ಕವಚ ಅಳವಡಿಕೆ.
- ದೇವಸ್ಥಾನದ ಹಿಂಬದಿಯಲ್ಲಿ ಇಂಟರ್‌ಾಕ್ ಅಳವಡಿಕೆ.
ದೇವಸ್ಥಾನದ ಅಭಿವೃದ್ಧಿ, ಜೀರ್ಣೋದ್ಧಾರ, ಬ್ರಹ್ಮಕಲಶ, ಭರಣಿ ಮಹೋತ್ಸವ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಮೇಲ್ಕಾಣಿಸಿದಂತೆ ಆಗಬೇಕಾದ ಕೆಲಸಗಳ ಬಗ್ಗೆ ಶೀಘ್ರ ಮಂಥನವಾಗಿ ದೇಗುಲಕ್ಕೊಂದು ಹೊಸ ರೂಪ ಮೂಡಿ ಬರಬೇಕೆಂಬುದು ನಮ್ಮ ಆಶಯ, ದಾನವಿತ್ತು ದೇವಸ್ಥಾನದ ಕಳೆಯನ್ನೇ ಬೆಳಗಿದ ಗುಣಶೀಲರಾದ ಮಹಾಜನರಿಗೆ ಕೃತಜ್ಞತೆಯ ಋಣ ಭಾರವನ್ನು ಸಲ್ಲಿಸಿ, ಭಗವತೀ ಮಾತೆಯ ಅನನ್ಯ ಭಕ್ತರಾಗಿ, ಅನು ದಿನವು ಕರ ಮುಗಿವ ಹಿರಿಯ ಕಿರಿಯ ಬಂಧುಗಳಲ್ಲಿ ಸವಿನಯದ ಸವಿನುಡಿಗಳೊಂದಿಗೆ ಯೋಜಿತ ಕಾರ್ಯಗಳಿಗೆ ಉದಾರತೆಯ ಕೊಡುಗೆಗಳನ್ನಿತ್ತು ಕೃತಾರ್ಥರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಶ್ರೀ ರೋಹಿದಾಸ್ ಬಂಗೇರ ಮುಂಬೈ – ಗೌರವಾಧ್ಯಕ್ಷರು
ಶ್ರೀ ನಳಿನ್ ಕುಮಾರ್ ಕಟೀಲು – ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ
ಶ್ರೀ ವಾಮನ ಇಡ್ಯಾ – ಕಾರ್ಯಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ
ಶ್ರೀ ವಿಶ್ವನಾಥ, ಆದಿ ಉಡುಪಿ – ಉಪಾಧ್ಯಕ್ಷರು ಆಡಳಿತ ಸಮಿತಿ
ಶ್ರೀ ರಮೇಶ್ ಬಂಗೇರ – ಪ್ರಧಾನ ಕಾರ್ಯದರ್ಶಿ ಆಡಳಿತ ಸಮಿತಿ
ಶ್ರೀ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅನುವಂಶಿಕ ಮೊತ್ತೇಸರರು ಮತ್ತು ಪ್ರಧಾನ ಅರ್ಚಕರು
ಶ್ರೀ ಚಂದ್ರಶೇಖರ್ ಬೆಳ್ಳಡ ಗಂಪಮನೆ ಕಟೀಲು ಆಡಳಿತ ಮೊತ್ತೇಸರರು
ಶ್ರೀ ವೇದಪ್ರಕಾಶ್ ಎಂ. ಶ್ರೀಯಾನ್ ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ, ಮುಂಬಯಿ
ಶ್ರೀ ರಾಜೇಂದ್ರಪ್ರಸಾದ್ ಎಕ್ಕಾರು. ಶ್ರೀ ಶಿವಣ್ಣ ಅಂಚನ್ ಕಾಪು – ಜತೆ ಕಾರ್ಯದರ್ಶಿಗಳು ಆಡಳಿತ ಸಮಿತಿ
ಶ್ರೀ ಸುರೇಶ್ ಕೆ. ಬಂಗೇರ, ತೋಕೂರು ಕೋಶಾಧಿಕಾರಿ ಬ್ರಹ್ಮಕಲಶೋತ್ಸವ ಸಮಿತಿ
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬ್ರಹ್ಮಕಲಶೋತ್ಸವ ಸಮಿತಿ ಮುಂಬಯಿ
ಆಚಾರ ಪಟ್ಟವರು, ಏಳೂರ ಗುರಿಕಾರರು ಹಾಗು ಸಸಿಹಿತ್ತು ಗ್ರಾಮಸ್ಥರು ಸಸಿಹಿತ್ತು ಶ್ರೀ ಭಗವತೀ ದೇವಸ್ಥಾನ