
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಯಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಸತತ ನಾಲ್ಕನೇ ವರ್ಷವೂ ರಾಜ್ಯ ಮಟ್ಟದ “ಉತ್ತಮ ಸೌಹಾರ್ದ ಸಹಕಾರ ಸಂಘ” ಪ್ರಶಸ್ತಿಗೆ ಆಯ್ಕೆಯಾಗಿ ಅಪೂರ್ವ ಗೌರವಕ್ಕೆ ಪಾತ್ರವಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯು ಸಂಘದ ಸದಸ್ಯ ಕೇಂದ್ರಿತ ಸೇವೆ, ಪಾರದರ್ಶಕ ಆಡಳಿತ, ಹಣಕಾಸು ಸ್ಥಿರತೆ ಮತ್ತು ಸಾಮಾಜಿಕ ಬದ್ಧತೆಯನ್ನು ಗುರುತಿಸಿ ಗೌರವಿಸುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭವು ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೫ರ ಅಂಗವಾಗಿ ದಿನಾಂಕ ೧೬-೧೧-೨೦೨೫ರ ಆದಿತ್ಯವಾರ ಬೆಳಿಗ್ಗೆ ೧೦ ಗಂಟೆಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಭವ್ಯವಾಗಿ ನಡೆಯಲಿದೆ.
ಸಂಘದ ಅಧ್ಯಕ್ಷರಾದ ಸಹಕಾರರತ್ನ ಎ. ಸುರೇಶ್ ರೈ, ಉಪಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್ ಹಾಗೂ ಆಡಳಿತ ಮಂಡಳಿ, ಕಛೇರಿ ಸಿಬ್ಬಂದಿ ಮತ್ತು ಎಲ್ಲ ಶಾಖಾ ವ್ಯವಸ್ಥಾಪಕರು ಈ ಸಾಧನೆಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯಾಶೀರ್ವಾದ ಹಾಗೂ ಸದಸ್ಯ ಬಾಂಧವರ, ಹಿತೈಷಿಗಳ ನಿರಂತರ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
“ನಿಮ್ಮೆಲ್ಲರ ನಿಸ್ವಾರ್ಥ ಪ್ರೀತಿ ಮತ್ತು ನಂಬಿಕೆಯೇ ನಮ್ಮ ಸೇವಾ ಯಾತ್ರೆಗೆ ದಿಟವಾದ ಚಾಲಕ ಶಕ್ತಿ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಪ್ರಜೆಯ ಆರ್ಥಿಕ-ಸಾಮಾಜಿಕ ಒಳಿತಿಗಾಗಿ ಇನ್ನಷ್ಟು ಪರಿಣಾಮಕಾರಿ ಸೇವೆ ಸಲ್ಲಿಸುವುದೇ ನಮ್ಮ ಮುಂದಿನ ಗುರಿ” ಎಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.
ಈ ಸಾಧನೆಗೆ ಸದಸ್ಯರು, ಹಿತೈಷಿಗಳು, ಸ್ಥಳೀಯ ಗಣ್ಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸತತ ನಾಲ್ಕು ವರ್ಷಗಳ ರಾಜ್ಯ ಮಟ್ಟದ ಪ್ರಶಸ್ತಿ ಒಡಿಯೂರು ಸೌಹಾರ್ದ ಸಹಕಾರಿ ಸಂಘವನ್ನು ಕರ್ನಾಟಕದ ಸಹಕಾರಿ ಚಳವಳಿಯ ಮಾದರಿ ಸಂಸ್ಥೆಯಾಗಿ ಸ್ಥಾಪಿಸಿದೆ.