
ವಿಟ್ಲ ನ. 28: ಆಧ್ಯಾತ್ಮದಿಂದ ಬದುಕು ಸುಂದರ. ಅಂತರಂಗದ ಅಂಧಕಾರವನ್ನು ಆತ್ಮಜ್ಯೋತಿಯನ್ನು ದೂರವಾಗಿಸಿ, ಬೆಳಗಬೇಕು. ಧರ್ಮದ ಪುನರುತ್ಥಾನಕ್ಕಾಗಿ ಭಗವಂತ ಅವತಾರ ತಾಳಿದ್ದು ದತ್ತಾತ್ರೇಯನ ಅವತಾರ ವಿಶಿಷ್ಟವಾ ಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ, ಶ್ರೀದತ್ತ ಮಹಾಯಾಗ ಸಪ್ತಾಹ, ಶ್ರೀದತ್ತ ಕೋಟಿ ನಾಮಜಪಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಮೊಬೈಲ್‌ನಿಂದ ಮನಸ್ಸು ಕಲುಷಿತಗೊಂಡಿದೆ. ಆ ಪ್ರಪಂಚದಿಂದ ಹೊರ ಬರುವುದಕ್ಕೆ ಕೋಟಿ ನಾಮ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಾತ್ವಿಕ ಭಾವದಲ್ಲಿ ನಡೆಸುವ ಜಪದಿಂದ ಪರಿಣಾಮವನ್ನು ಕಾಣಬಹುದು ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀ ಸಾನಿಧ್ಯ ವಹಿಸಿದ್ದರು. ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ ರೇವತಿ ವಾಮಯ್ಯ ಶೆಟ್ಟಿ ಉಷಾ ಕುಮಾರ್ ಶೆಟ್ಟಿ ಕಲ್ಪನಾ ಕೃಷ್ಣಶೆಟ್ಟಿ, ದತ್ತಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷ ಎ. ಸುರೇಶ್ ರೈ, ಕೋಶಾಧಿಕಾರಿ ಲೋಕನಾಥ ಜಿ. ಶೆಟ್ಟಿ ಉಪಾಧ್ಯಕ್ಷ ಕಾನ ಈಶ್ವರ ಭಟ್ ಮತ್ತಿತರರು ಉಪ ಸ್ಥಿತರಿದ್ದರು.
ದೀಪಾರಾಧನೆ, ಶ್ರೀಗಣಪತಿ ಹವನ, ಶ್ರೀದತ್ತಮಹಾಯಾಗ ಸಪ್ತಾಹ ಆರಂಭ, ಶ್ರೀ ಗುರುದೇವಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ದತ್ತಮಾಲಾಧಾರಣೆ, ಶ್ರೀದತ್ತ ಕೋಟಿ ನಾಮ ಜಪಯಜ್ಞಕ್ಕೆ ಚಾಲನೆ, ಸಂಜೆ ಶ್ರೀದತ್ತಾಂಜನೇಯ ದೇವರ ಪಲ್ಲಕಿ ಉತ್ಸವ ನಡೆಯಿತು.
ಪ್ರಧಾನ ಕಾರ್ಯದರ್ಶಿ ಮಾತೇಶ್ ಭಂಡಾರಿ ಸ್ವಾಗತಿಸಿದರು. ಯಶವಂತ ವಿಟ್ಲ ವಂದಿಸಿದರು.