‘ಇಂಡಿಯಾ’ ಕಪ್ ಗೆಲ್ಲಲು ಬೇಕಿದೆ ‘ಟೀಂ’ ಆಟ !
ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಟಿ-20 ವಿಶ್ವ ಕಪ್ 2026ಪ್ರಾರಂಭವಾಗಿ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಟಲಿ, ಅಮೇರಿಕಾ, ನೇಪಾಳ ಮುಂತಾದ ಕ್ರಿಕೆಟ್ ‘ಶಿಶು’ಗಳೂ ಬಲಿಷ್ಟ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವುದು ಈ ವರ್ಷದ ಪಂದ್ಯಾಟದ ಹೈಲೈಟ್. ಅತ್ಯಂತ ದೊಡ್ಡ ಏರುಪೇರು ಫಲಿತಾಂಶ ಎಂದರೆ ಜಿಂಬಾಬ್ವೆ ತಂಡ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದು. ಈ ಸೋಲು ಹಾಗೂ ಮಳೆಯ ಅವ ಕೃಪೆಯಿಂದ ಆಸ್ಟ್ರೇಲಿಯಾ ಲೀಗ್ ಹಂತದಲ್ಲೇ ಗಂಟು ಮೂಟೆ ಕಟ್ಟುವಂತಾಗಿದೆ.

ಭಾರತ ತಂಡವೇನೋ ಅಜೇಯ ತಂಡವಾಗಿ ಸೂಪರ್ 8 ವಿಭಾಗವನ್ನು ಪ್ರವೇಶಿಸಿದೆ. ನಮೀಬಿಯಾ ಹಾಗೂ ಪಾಕಿಸ್ತಾನದ ವಿರುದ್ಧದ ಹೈ ವೋಲ್ಟೇಜ್ ಪಂದ್ಯವೊಂದನ್ನು ಹೊರತು ಪಡಿಸಿ ಬೇರೆ ಪಂದ್ಯಗಳಲ್ಲಿ ಅದು ವಿಶ್ವ ಚಾಂಪಿಯನ್ ಆಟವನ್ನು ಪ್ರದರ್ಶನ ಮಾಡಿಲ್ಲ. ಅಮೇರಿಕಾ ಎದುರಿನ ಮೊದಲ ಪಂದ್ಯವನ್ನು ಗಮನಿಸುವುದಾದರೆ ಭಾರತೀಯ ಮೂಲದವರೇ ಅಧಿಕ ಸಂಖ್ಯೆಯಲ್ಲಿರುವ ಅಮೇರಿಕಾ ತಂಡದ ಎದುರು ಬ್ಯಾಟಿಂಗ್ ನಡೆಸಲು ಬಹಳಷ್ಟು ತಿಣುಕಾಡಿತು. ಆರಂಭಿಕ ದಾಂಡಿಗರಾದ ಅಭಿಷೇಕ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಯಾರೂ ತಮ್ಮ ಛಾತಿಯ ಆಟವನ್ನು ಪ್ರದರ್ಶನ ಮಾಡಲೇ ಇಲ್ಲ. ತಂಡದ ನಾಯಕನಾದ ಕಾರಣಕ್ಕೋ ಏನೋ ಸೂರ್ಯ ಕುಮಾರ್ ಯಾದವ್ ಒಬ್ಬರು ಮಾತ್ರ ಜವಾಬ್ದಾರಿಯುತ ಆಟ ಆಡಿ ೮೪ ರನ್ ಗಳಿಸಿದರು. ಇದರಿಂದಾಗಿ ತಂಡದ ಮೊತ್ತ 161 ತಲುಪಿತು. ಇಲ್ಲವಾದಲ್ಲಿ ನಮ್ಮ ಪರಿಸ್ಥಿತಿ ಹೀನಾಯವಾಗುತ್ತಿತ್ತು. ಎಲ್ಲಾ ತಂಡಗಳು ಬಲಿಷ್ಟವಾಗಿಯೇ ಇವೆ, ಎಲ್ಲಾ ತಂಡಗಳಲ್ಲೂ ಉತ್ತಮ ಆಟಗಾರರೂ, ತರಬೇತುದಾರರೂ ಇದ್ದಾರೆ ಎಂದು ಭಾರತ ತಂಡದ ಸದಸ್ಯರು ನೆನಪಿಟ್ಟುಕೊಳ್ಳಬೇಕು. ಅಮೇರಿಕಾ ಎದುರು ನಾವು ಕಳೆದುಕೊಂಡ ವಿಕೆಟ್ ಗಳ ಸಂಖ್ಯೆ ೯. ಆದರೆ ಅವರು ನಮ್ಮ ವಿರುದ್ಧ ಕಳೆದುಕೊಂಡದ್ದು ೮ ವಿಕೆಟ್ ಮಾತ್ರ. ಕ್ಷೇತ್ರ ರಕ್ಷಣೆಯಲ್ಲೂ ನಾವು ಪ್ರಾರಂಭಿಕ ಪಂದ್ಯದಿಂದ ಬಹಳಷ್ಟು ಎಡವಟ್ಟುಗಳನ್ನು ಮಾಡುತ್ತಲೇ ಬರುತ್ತಿದ್ದೇವೆ.
ನಮೀಬಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮ ಆಟ ಪ್ರದರ್ಶನ ಮಾಡಿದರೂ ೯ ವಿಕೆಟ್ ಕಳೆದುಕೊಂಡಿರುವುದು ಉತ್ತಮ ವಿಷಯವಲ್ಲ. ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಆಡಿದರು.
ಪಾಕಿಸ್ತಾನದ ಎದುರಿನ ಹೈ ವೋಲ್ಟೇಜ್ ಪಂದ್ಯದಲ್ಲೂ ಭರವಸೆಯ ದಾಂಡಿಗ ಅಭಿಷೇಕ್ ಶರ್ಮ ಸೊನ್ನೆ ಸುತ್ತಿದರು. ಇಲ್ಲಿ ಆಟವಾಡಿದ್ದು ಇಶಾನ್ ಕಿಶನ್ ಮಾತ್ರ. ಬೇರೆ ಯಾವ ಆಟಗಾರನಿಂದಲೂ ಹೇಳಿಕೊಳ್ಳುವ ಬೆಂಬಲ ಸಿಗಲಿಲ್ಲ. ಹಾಗೂ ಹೀಗೂ 175 ರನ್ ಮಾಡಿದ ಭಾರತವನ್ನು ಸೋಲಿಸಬಲ್ಲ ಅವಕಾಶ ಪಾಕಿಸ್ತಾನಕ್ಕೆ ಇತ್ತು. ಆದರೆ ಅವರೂ ತಡಬಡಾಯಿಸಿ 114ಕ್ಕೆ ಆಲೌಟ್ ಆದರು. ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯದ ಸಮಯದಲ್ಲಿ ಎರಡೂ ತಂಡಗಳ ಸದಸ್ಯರು ವಿಪರೀತವಾಗಿ ಒತ್ತಡದಲ್ಲಿರುವುದು ಸಹಜವೇ. ಈ ಬಾರಿ ಪಾಕಿಸ್ತಾನ ಈ ಒತ್ತಡವನ್ನು ತಡೆದುಕೊಳ್ಳಲಿಲ್ಲ. ಬಹುಬೇಗನೇ ಅಂದರೆ ಪ್ರಾರಂಭದಲ್ಲೇ ವಿಕೆಟ್ ಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಆದರೆ ಭಾರತೀಯ ಬೌಲರ್ ಗಳಿಗೆ ಕ್ಷೇತ್ರ ರಕ್ಷಕರು ತಕ್ಕುದಾದ ಸಾಥ್ ನೀಡಲಿಲ್ಲ. ತಿಲಕ್ ವರ್ಮ ಅಂತೂ ಮೂರು ಬಾರಿ ಕ್ಯಾಚ್ ನೆಲಕ್ಕೆ ಚೆಲ್ಲಿದರು. ಒಮ್ಮೆಯಂತೂ ಅವರದ್ದೇ ಬೌಲಿಂಗ್ ನಲ್ಲಿ ಕ್ಯಾಚ್ ಬಿಟ್ಟರು. ಇಶಾನ್ ಕಿಶಾನ್ ಉತ್ತಮ ಬ್ಯಾಟಿಂಗ್ ಮಾಡುತ್ತಾರಾದರೂ ವಿಕೆಟ್ ಕೀಪಿಂಗ್ ನಲ್ಲಿ ಹಲವು ಕ್ಯಾಚ್ ಬಿಟ್ಟಿದ್ದಾರೆ. ಈ ಪಂದ್ಯದಲ್ಲಿ ನಮ್ಮ ಕ್ಷೇತ್ರರಕ್ಷಕರು ಎಲ್ಲಾ ಕ್ಯಾಚ್ ಗಳನ್ನು ಹಿಡಿಯುತ್ತಿದ್ದರೆ ಪಾಕಿಸ್ತಾನ 100 ರನ್ ಒಳಗೆ ಆಲೌಟ್ ಆಗುತ್ತಿತ್ತು. ಈ ಪಂದ್ಯಲ್ಲಿ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು.
ನೆದರ್ ಲ್ಯಾಂಡ್ ವಿರುದ್ಧ ಭಾರತ ತನ್ನ ನಾಲ್ಕನೇ ಪಂದ್ಯ ಆಡುವ ಹೊತ್ತಿಗೆ ಆಗಲೇ ಸೂಪರ್ ೮ ತಲುಪಿ ಆಗಿತ್ತು. ಈ ಕಾರಣದಿಂದ ನಮ್ಮ ಸೂಪರ್ ಬ್ಯಾಟಿಂಗ್ ಕ್ರಮಾಂಕ ಮತ್ತೆ ಅಲುಗಾಡಿತು. ಅಭಿಷೇಕ್ ಶರ್ಮ ಹ್ಯಾಟ್ರಿಕ್ ಸೊನ್ನೆ ಗಳಿಸಿದರು. ಇಶಾನ್ ಕಿಶನ್, ತಿಲಕ್ ವರ್ಮ, ಸೂರ್ಯ ಕುಮಾರ್ ಮೊದಲಾದವರು ಉತ್ತಮ ಆರಂಭ ಮಾಡಿದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಭಾರತದ ರನ್ 160-170ರ ಒಳಗೇ ಇರಬಹುದು ಎಂದು ಅಂದಾಜು ಮಾಡಿದವರಿಗೆ ಶಿವಂ ದುಬೆ ಉತ್ತಮ ಸ್ಫೋಟಕ ಆಟ ಆಡುವ ಮೂಲಕ 193 ರ ಮೊತ್ತಕ್ಕೆ ಏರಿಸಿದರು. ಶಿವಂ ದುಬೆ ಅವರ ರನ್ ೬೬.
ಶಿವಂ ದುಬೆ ಉತ್ತಮ ಆಟ ಆಡದೇ ಇದ್ದಲ್ಲಿ ಖಂಡಿತಕ್ಕೂ ಭಾರತದ ರನ್ ೧೭೦ರ ಆಸುಪಾಸಿನಲ್ಲೇ ಇರುತ್ತಿತ್ತು. ನೆದರ್ ಲ್ಯಾಂಡ್ ನ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ 173 ರನ್ ಗಳಿಸಿ ಸೋಲಿನ ಅಂತರವನ್ನು ಕೇವಲ 17 ರನ್ ಗೆ ಸೀಮಿತಗೊಳಿಸಿದ್ದರು. ಒಂದು ಹಂತದಲ್ಲಂತೂ ನೆದರ್ ಲ್ಯಾಂಡ್ ಭಾರತದ ರನ್ ಅನ್ನು ಮೀರಿ ಗೆಲುವು ಸಾಧಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಬೌಲರ್ ಗಳ ಕೈಚಳಕದಿಂದ ಭಾರತ ಗೆದ್ದಿತು.
ಈ ನಾಲ್ಕು ಲೀಗ್ ಪಂದ್ಯಗಳನ್ನು ಆಡಿದ ತಂಡಗಳನ್ನು ಗಮನಿಸಿದಾಗ ಪಾಕಿಸ್ತಾನ ಹೊರತು ಪಡಿಸಿ ಉಳಿದ ಯಾವ ತಂಡಗಳೂ ಭಾರತಕ್ಕೆ ಸಾಟಿಯಾಗಲಾರವು. ಭಾರತದ ತಂಡವೂ ಉತ್ತಮ ಆಲ್ ರೌಂಡರ್ ಗಳನ್ನು ಹೊಂದಿದ್ದು ಅತ್ಯುತ್ತಮ ಬ್ಯಾಟಿಂಗ್ ಬಲವನ್ನು ಹೊಂದಿದೆ. ಆದರೆ ಪ್ರತೀ ಪಂದ್ಯದಲ್ಲಿ ಒಬ್ಬರು ಮಾತ್ರ ಆಡುತ್ತಿದ್ದಾರೆ. ಉಳಿದವರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಕ್ಷೇತ್ರ ರಕ್ಷಕರೂ ವಿಪರೀತ ಎನಿಸುವಷ್ಟು ಕ್ಯಾಚ್ ಗಳನ್ನು ಕೈ ಚೆಲ್ಲುತ್ತಿದ್ದಾರೆ. ನೆದರ್ ಲ್ಯಾಂಡ್ ಪಂದ್ಯದಲ್ಲೂ ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್ ಕ್ಯಾಚ್ ಬಿಟ್ಟಿದ್ದರು. ಬಹುಷಃ ತಿಲಕ್ ವರ್ಮ ಕ್ಯಾಚ್ ಕೈಚೆಲ್ಲುವುದರಲ್ಲಿ ದಾಖಲೆ ಮಾಡಲು ಹೊರಟಿದ್ದಾರೋ ಏನೋ?
ಈಗ ಭಾರತ ಸೂಪರ್ ೮ ತಲುಪಿದೆ. ಇಲ್ಲಿ ನಮ್ಮ ವಿಭಾಗದಲ್ಲಿರುವ ತಂಡಗಳು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್. ಇನ್ನಾದರೂ ನಾವು ‘ಟೀಂ ಇಂಡಿಯಾ’ ರೀತಿಯಲ್ಲಿ ಒಗ್ಗಟ್ಟಾಗಿ ಆಡಬೇಕಿದೆ. ಹ್ಯಾಟ್ರಿಕ್ ಸೊನ್ನೆಯ ಅಪಖ್ಯಾತಿಯಿಂದ ಅಭಿಷೇಕ್ ಶರ್ಮಾ ಹೊರಬರಬೇಕು. ರಿಂಕು ಸಿಂಗ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ಎಲ್ಲರೂ ಅವಕಾಶ ಸಿಕ್ಕಾಗ ದೊಡ್ಡ ಜೊತೆಯಾಟ ಆಡಬೇಕು. ಫೀಲ್ಡಿಂಗ್ ಸಮಯದಲ್ಲಿ ಕ್ಯಾಚ್ ಗಳನ್ನು ಕೈ ಚೆಲ್ಲಲೇ ಬಾರದು. ಒಂದು ಮಿಸ್ ಕ್ಯಾಚ್ ತುಂಬಾ ದುಬಾರಿಯಾದ ಇತಿಹಾಸ ಇದೆ. ಮುಂದಿನ ದಿನಗಳಲ್ಲಿ ಭಾರತ ಒಂದು ತಂಡವಾಗಿ ಆಡಲಿ, ಗೆಲುವು ನಮ್ಮದಾಗಲಿ, ಟಿ ೨೦ ವಿಶ್ವಕಪ್ ಈ ಸಲವೂ ನಮ್ಮ ಮಡಿಲು ಸೇರಲಿ. ಆಲ್ ದಿ ಬೆಸ್ಟ್ ‘ಟೀಂ ಇಂಡಿಯಾ’
ಅಶ್ವಿನ್ ಪದವಿನಂಗಡಿ