www.gurufront.com

ತಾರೀಖು 2023ರ ಸೆಪ್ಟೆಂಬರ್ 30; ಅಂದು ನಿಡಿದಾದ ಒಂದು ನಿಟ್ಟುಸಿರು ವೇದಿಕೆಯಿಂದ ನೇರವಾಗಿ ನನ್ನ ಕಿವಿಗಪ್ಪಳಿಸಿತ್ತು.

ವೇದಿಕೆ: ಮುಂಬಯಿ ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಗೃಹ ತುಂಬಿ ತುಳುಕಿ ಹೊರಗೂ ಅಷ್ಟೇ ಜನಸಾಗರ ನೆರೆದಿತ್ತು. ಅಂದಿನ ನ ಭೂತೋ.. ಸೀನು ಸೀನರಿಗೆ ನಾನು ನೇರವಾಗಿ ಬೊಟ್ಟು ಮಾಡುವುದಿದ್ದರೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರನ್ನೇ. ಅವರ ವಿದ್ಯಾರ್ಥಿಯಾಗಿರುವ ಅನಿತಾರ ಪಿಎಚ್.ಡಿ ಕೋರ್ಸ್ ವರ್ಕ್‌ ಸಲುವಾಗಿ ಜಯ ಸುವರ್ಣ ಅವರ ಸಮಗ್ರ ಜೀವನ ಕಥನ ಬರೆಯಲು ಆದೇಶಿಸದೆ ಇರುತ್ತಿದ್ದರೆ…!

ಆ ಒಂದು ಸವಾಲು ಖಂಡಿತಾ ತಾಕೊಡೆ ಅವರಿಗೆ ದೊಡ್ಡ ಹೊರೆ. ಮುಂಬಯಿಯಲ್ಲಿ ಬೃಹತ್ತಾಗಿ ಬೆಳೆದು ಇಡೀ ಸ್ವಜಾತಿ ಸಂಕುಲಕ್ಕೆ ನೆರಳಾಗಿ ನಿಂತು, 2020 ಅಕ್ಟೋಬರ್ 21ರಂದು, ನಾನು ಬಂದ ಕೆಲಸ ಆಯ್ತು ಅಂತ ಸಂತೃಪ್ತಿಯಿಂದ ನಿರ್ಗಮಿಸಿದ ಯುಗ ಪ್ರವರ್ತಕ ಜಯಣ್ಣನ ಕಥನದ ಉತ್ಪನನ ಅಷ್ಟು ಸುಲಭವಲ್ಲ.

ಶೃದ್ಧೆ, ಪ್ರಾಮಾಣಿಕತೆ, ಛಲ ಮತ್ತು ಭಕ್ತಿಯನ್ನೇ ಉಸಿರಾಗಿಸಿಕೊಂಡು ಉಪಾಧ್ಯ ಸರ್ ಅವರ ಆಜ್ಞೆಯನ್ನು ಶಿರಸಾ ವಹಿಸಿ ತಾಕೊಡೆ ಟೊಂಕ ಕಟ್ಟಿ ಸಮರಕ್ಕೆ ಧುಮುಕಿದರು ನೋಡಿ. ಆಗ ಎಲ್ಲರಿಗಿಂತ ಮೊದಲು ಅಚ್ಚರಿಯಾದದ್ದು ನನಗೇ.

ಕತೆ ಕವನ ಕಾಲಂಗಳಲ್ಲಿ ಮಿಂಚುತ್ತಿದ್ದ ಅನಿತಾ ಅವರು ಉಪಾಧ್ಯ ಸರ್ ಅವರ ನಿರ್ದೇಶನದಂತೆ ಈ ಹಿಂದೆ ಮೋಹನ ತರಂಗ ವ್ಯಕ್ತಿ ಚಿತ್ರಣ ಚಿತ್ರಿಸಿ ಹೊಸ ಸ್ತರದ ಅನುಭವವನ್ನೂ ಪಡೆದಿದ್ದರು. ಅದುವೇ ಸುವರ್ಣಯುಗದ ಯಶಸ್ಸಿಗೆ ಮುನ್ನುಡಿ ಅನ್ನೋದು ಹಲವರ ಅಂಬೋಣ.

1982 ರಿಂದ ಬಜಾರ್ ಗೇಟ್ ಪರಿಸರದಲ್ಲಿ ಉಗ್ರರೂಪದ ಜಯಣ್ಣನ ಪರಿಚಯವಾಗಿ ಅವರು ದೇವರ ಪಾದ ಸೇರುವ ತನಕ ನನ್ನ ಕುತೂಹಲದ ಕಣ್ಣುಗಳಿಗೆ ಆತ್ಮೀಯರಾಗಿದ್ದರು. ಹಾಗಾಗಿ ಅನಿತಾ ಅವರು ಜಯಣ್ಣ ಅವರನ್ನು ಹೇಗೆ ಚಿತ್ರಿಸಿರಬಹುದು ಎಂದು ನೋಡೋಣ ಅಂತ ಸುವರ್ಣಯುಗ ಓದಿದೆ. ಆಗ ನನಗನಿಸಿದ್ದು… ಅಂದು ನನ್ನ ಕಿವಿಗಪ್ಪಳಿಸಿದ ನಿಟ್ಟುಸಿರು ಸಹಜವೇ ಆಗಿದೆ. ಆದು ಬಿಡುಗಡೆಯ ನಿಟ್ಟುಸಿರು, ಧನ್ಯತೆಯ ನಿಟ್ಟುಸಿರು, ಸಾರ್ಥಕ್ಯದ ನಿಟ್ಟುಸಿರು.

ಜಯಣ್ಣ ಯಾರು ಏನು ಅಂತ ಪ್ರಶ್ನಿಸುವ ಅಮಾಯಕರಿಗೂ ಸುವರ್ಣಯುಗ ಒಂದು ದ್ವೇಷ ನಿವಾರಕ ಗ್ರಂಥವಾದೀತು. ಪೂರ್ವಾಗ್ರಹ ಬಿಟ್ಟು ಓದಬೇಕಾಗಿ ನನ್ನ ಕಳಕಳಿಯ ವಿನಂತಿ. ಸುವರ್ಣಯುಗವನ್ನು ಅವರ ಸಮಾಜ ಬಾಂಧವರಷ್ಟೇ ಅಲ್ಲ, ಕನ್ನಡ ಕುಲಕೋಟಿ ಓದಬೇಕು. ಜಯಣ್ಣ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು.

ಅಧ್ಯಯನಯೋಗ್ಯ ಸುವರ್ಣಯುಗ ಇಂಗ್ಲಿಷ್ ನಲ್ಲೂ ಅಚ್ಚಾಗಿ ಈಗಿನ ಮಕ್ಕಳೂ ತಿಳಿಯುವಂತಾದರೆ ಉಪಾಧ್ಯ ಸರ್ ಅವರ ಆಶಯಕ್ಕೆ, ತಾಕೊಡೆ ಅವರ ಶ್ರಮಕ್ಕೆ ಅನರ್ಥ್ಯ ಬೆಲೆ ಬಂದೀತು.

ನಾವು ನಿರ್ಮಿಸಿದ ಸುದ್ದ ತುಳು ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಿರಕ್ಕೂ ಮಿಕ್ಕ ಚಿತ್ರಗಳಿಗೆ ಪೈಪೋಟಿ ನೀಡಿ ಪ್ರಶಸ್ತಿ ಗೆದ್ದಾಗ, ಜಯಣ್ಣ ಅವರು ಅಂದರಂತೆ: ತುಳು ನಮ್ಮ ತಾಯಿ ಭಾಷೆ. ಸುದ್ದ ಸದ್ದು ಮಾಡಿದ್ದು ತುಳು ಭಾಷೆಯ ಮೂಲಕ. ತುಳು ಭಾಷೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿ ನಮ್ಮ ಭಾಷೆಯ ಅಧ್ಯಯನಕ್ಕಾಗಿ ಆಯೋಜಕರು ತುಳುನಾಡಿಗೂ ಬರುವವರಿದ್ದರಂತೆ. ನಾವೆಲ್ಲ ಜಾತಿ ಮತ ಭೇದವಿಲ್ಲದೆ ಈ ಹೆಮ್ಮೆಯನ್ನು ಸಂಭ್ರಮಿಸಬೇಕು, ಪುರಸ್ಕರಿಸಬೇಕು ಅಂತ ನನ್ನನ್ನು ವೇದಿಕೆಗೆ ಕರೆದು ಅದ್ದೂರಿಯಾಗಿ ಗೌರವಿಸಿದ್ದಾರೆ. ಅಂದು ನಾನು ಉತ್ತರವಾಗಿ ಮಾತಾಡುವಾಗ ಸ್ವಲ್ಪ ಭಾವುಕನಾದೆ. ಅದನ್ನು ನೋಡಿದ ಹೆಸರಾಂತ ಪತ್ರಕರ್ತರೊಬ್ಬರು ಪ್ರೀತಿಯಿಂದ ಏನು ಮೋನಣ್ಣಾ ಇದಕ್ಕೆಲ್ಲ ಆಳೋದಾ? ಸನ್ಮಾನ ಆಗ್ತದೆ ಹೋಗದೆ ಅಂತ ಬೆನ್ನು ತಟ್ಟಿ ಸಮಾಧಾನ ಪಡಿಸಿದರು. ನಾನು ಅಂದು ಭಾವುಕನಾದ ಕ್ಷಣದ ಹಿಂದೆ ಒಂದು ದೊಡ್ಡ ಕತೆನೇ ಇದೆ ಅಂತ ಅವರಲ್ಲಿ ಅಲ್ಲ; ಯಾರಲ್ಲೂ ಹೇಳಿಲ್ಲ. ಬೆಂಗಳೂರಿನ ಒಂದು ಪ್ರತಿಷ್ಠಿತ ಸಂಸ್ಥೆ ನನ್ನನ್ನು ಸನ್ಮಾನಿಸುವ ಸಲುವಾಗಿ ದಿನ ನಿಗದಿ ಮಾಡಿ ನನಗೆ ತಿಳಿಸಿದ್ದರು. ಆದರೆ ಅಷ್ಟು ದೊಡ್ಡ ಪ್ರಶಸ್ತಿ ಬಂದರೂ ನಮ್ಮದೇ ಮುಂಬಯಿ ಸಂಸ್ಥೆ ಯಾಕೆ ಗೌರವಿಸಲಿಲ್ಲ ಅನ್ನುವ ಪ್ರಸ್ತಾಪ ಒಂದು ಮೀಟಿಂಗ್ ನಲ್ಲಿ ಬಂತು.

ಸದ್ಯ ಆ ಕಾರ್ಯಕ್ರಮ ಮುಂದೂಡಿದ್ದೇವೆ. ಅವರು ಸನ್ಮಾನಿಸಿದ ನಂತರ ನಾವು ನಿಮ್ಮನ್ನು ಸನ್ಮಾನಿಸುತ್ತೇವೆ ಅಂತಂದರು. ಭಾಷೆಯ ಅಭಿಮಾನದಿಂದ ಮೋನಣ್ಣ ಸ್ವಂತ ಸೇವಿಂಗ್ಲನ್ನು ಸುರಿದು ಅಂತಾರಾಷ್ಟ್ರೀಯ ಮಟ್ಟದ ಡಿಜಿಟಲ್ ಸಿನ್ಹಾ ಸ್ಪರ್ಧೆಗೆ ಕಳಿಸಿದ್ದಾರೆ. ಹಣ ಮಾಡುವ ಉದ್ದೇಶವಿರುತ್ತಿದ್ದರೆ ದೊಡ್ಡ ಪರದೆಗೆ ಹೊಂದುವಂತೆ ಮಾಡಿ ಥಿಯೇಟರ್ ರಿಲೀಸ್ ಮಾಡೋದಿತ್ತು. ಹಾಗೆ ಮಾಡಿಲ್ಲ, ಅವರ ಭಾಷಾಭಿಮಾನದ ಪ್ರಶ್ನೆ ಬಂದಾಗ ಅದಷ್ಟೇ ಕಾಣುತ್ತದೆ. ನಾವು ಮೋನಣ್ಣನನ್ನು ಸನ್ಮಾನಿಸಿದ್ದಲ್ಲ, ತುಳುವನ್ನು ಗೌರವಿಸಿದ್ದು ಅನ್ನುವ ಅರ್ಥ ಬರುವ ರೀತಿಯಲ್ಲಿ ಜಯಣ್ಣ ಅಂದು ನನ್ನನ್ನು ಸನ್ಮಾಸಿದ್ದರು. ನಮ್ಮವರು ಇದನ್ನ ತಿಳಿದುಕೊಳ್ಳಬೇಕಿತ್ತು… ಅನ್ನುವ ನೋವು ನನಗೆ ಅಂದು ಅಳು ತರಿಸಿತ್ತು. ನನಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಬಂದಾಗಲೂ ಮೊದಲು ರೆಡಿಯಾದದ್ದು ಜಯಣ್ಣ ಅವರೆ- ಮೋನಣ್ಣನ್ ಲೆಪ್ಪುಲೆ. ಇಂತಹ ಮನಸ್ಸುಗಳು ದ್ವೇಷನಾಶಕ ಅಲ್ಲದೆ ಇನ್ನೇನು.

ಒಂದಿನ ಶಂಕರಣ್ಣನವರು ಹೋಟೆಲ್‌ಗೆ ಬನ್ನಿ ಮಾತಾಡೋದಿದೆ ಅಂತಂದರು. ಅವರ ವಿಲೆಪಾರ್ಲೆಯ ಹೋಟೆಲ್ ಗೆ ಹೋದೆ. ಜಯಣ್ಣ ನಿಮ್ಮತ್ರ ಮಾತಾಡಲು ಹೇಳಿದ್ದಾರೆ. ನಾವೊಂದು ಫಿಲಂ ಮಾಡೋಣ. ನಿಮ್ಮ ಸಹಕಾರ ಬೇಕು. ಕೂತು ಒಂದು ಅಂದಾಜು ಬಜೆಟ್ ಬಗ್ಗೆ ಮಾತಾಡೋಣ. ಬಿಡುವು ಮಾಡ್ಕೊಂಡು ತಯಾರಿಯಲ್ಲಿ ಬನ್ನಿ ಅಂತ ಅವರ ಫೋನ್ ನಂಬರ್ ಕೊಟ್ರು. ಜಯಣ್ಣ ಅಂದ್ರೆ ನನಗೆ ಅಪಾರ ಗೌರವ. ನನ್ನ ಮೇಲೆ ಭರವಸೆ ಇಟ್ಟು

ಕರೆದಿರಬಹುದು. ಆದರೆ ಬೇರೊಬ್ಬರ ಹಣದಲ್ಲಿ ನಾನು ಎಕ್ಸ್ ಪರಿಮೆಂಟ್ ಮಾಡಬಾರದು. ಮೊದಲು ನನ್ನ ಹಣದಲ್ಲೇ ನನ್ನ ಪ್ರತಿಭೆಯನ್ನು ಒರೆಗೆ ಹಚ್ಚಬೇಕು ಅನ್ನುವ ಜಾಯಮಾನ ನನ್ನದಾಗಿತ್ತು. ಮರಾಠಿ ಮಣ್ಣಿನ ಋಣ ತೀರಿಸಬೇಕು ನಾನೊಂದು ಮರಾಠಿ ಫಿಲಂ ಮಾಡಬೇಕು. ಅದು ಆದ ಮೇಲೆ ನಾವು ಮಾತಾಡೋಣ ಶಂಕರಣ್ಣ ಅಂತ ಅಂದೆ. ಅದಕ್ಕಾಗಿ ಒಂದು 50 ಲಕ್ಷ ಕೂಡಿಟ್ಟು ಇನ್ನೊಂದು 50 ಜಮೆಯಾಗಲಿ ಅನ್ನುವ ನಿರೀಕ್ಷೆಯಲ್ಲಿದ್ದೆ. ಈ ನಡುವೆ ಸ್ನೇಹದ ಅತಿ ವಿಶ್ವಾಸಕ್ಕೆ ಬಲಿಯಾಗಬೇಕಾಯ್ತು. ಆ ಹಣ ನನ್ನ ಗೆಳೆಯನೊಬ್ಬ ಸ್ವಲ್ಪ ದಿನದ ಮಟ್ಟಿಗೆ ಕೈಗಡ ತೊಗೊಂಡವನು ಇಂದಿಗೂ ಹಿಂತಿರುಗಿಸಲಿಲ್ಲ. ಏಡಿಯೂ ಇಲ್ಲ; ಏಡಿಗೆ ಹಾಕಿದ ಕೈಯೂ ಇಲ್ಲ.

ಜಯಣ್ಣ ಅದಕ್ಕೂ ಉಪಾಯ ಇದೆ ಮೋನಣ್ಣಾ ಅಂದರು. ನೀವು ಹಣ ಕೊಟ್ಟ ವ್ಯಕ್ತಿಯ ಹೋಟೆಲ್ ನಮ್ಮ ತಾಬೆಯಲ್ಲಿದೆ. ಏಲಂ ಆಗಿದೆ. ಆದರೂ ನಮ್ಮ ಬ್ಯಾಂಕಿಗೆ ಬರಬೇಕಾದ ಹಣ ಮತ್ತು ನಿಮಗೆ ಬರಬೇಕಾದ ಹಣ ಸೇರಿಸಿ ಒಂದು ಗಿರಾಕಿ ತನ್ನಿ ಅಂತಂದರು. ನಾನು ಯಾರೋ ಏನೋ… ಆದರೂ ಸೋತವರನ್ನು ತಕ್ಷಣ ಮೇಲೆತ್ತುವ ಅವರ ಗುಣಕ್ಕೆ ಏನು ಹೆಸರು ಕೊಡುತ್ತೀರಿ !!!

ಯಕ್ಷಗಾನ ಅಂದರೆ ಜಯಣ್ಣನಿಗೆ ಪಂಚ ಪ್ರಾಣ. ತುಳು ನಾಟಕ ಸ್ಪರ್ಧೆಗಳನ್ನು ಸಹ ನಡೆಸಿ ಸುಮಾರು ಮುನ್ನೂರು ಬಿಲ್ಲವ ಯುವಕರನ್ನು ಸ್ಟೇಜ್ ಹತ್ತಿಸುವ ಮೂಲಕ ನಾಟಕದ ಬಗ್ಗೆನೂ ಗೌರವ ಇದೆ ಅಂತ ಸ್ಪಷ್ಟಪಡಿಸಿದ್ದಾರೆ. ಭರತೆರೆನ್ ಲೆಪುಲೆ, ಓಂ ಅಣ್ಣಗ್ ಯಾನ್ ಪಂಡೆ ಪತ್ತೆ. ನಮ್ಮ ಯುವಕರಲ್ಲೂ ನಾಟಕದ ಅಭಿರುಚಿ ಹುಟ್ಟಬೇಕು. ಅದಕ್ಕಾಗಿ ರಂಗದ ಬಗ್ಗೆ ಅನುಭವ ಇರುವವರನ್ನು ಕರೆಯಿರಿ ಎಂದು ಅಪ್ಪಣೆ ಕೊಡಿಸಿದ್ದರು. ಮೂರು ದಿನ ಬೆಳಗ್ಗೆ 8 ರಿಂದ ರಾತ್ರಿ 10 ರ ತನಕ ನಡೆದಿದ್ದ ನಾಟಕ ಸ್ಪರ್ಧೆಯಲ್ಲಿ ಪ್ರತಿ ವರ್ಷದ ಮೂರು ದಿನಾನೂ ರಜೆ ಮಾಡಿ ಬಿಲ್ಲವ ಭವನದಲ್ಲೇ ಮೊಕ್ಕಾಂ ಹೂಡಿದ್ದೆ. ಏನೇ ವಿಷಯ ಮಾತಾಡುವುದಿದ್ದರೂ ಜಯಣ್ಣ ಕ್ಯಾಬಿನ್ ಗೆ ಬನ್ನಿ ಅಂತ ಕರೆದದ್ದೇ ಇಲ್ಲ. ನಾನೆಲ್ಲಾದರೂ ಹೊರಗೆ ನಿಂತಿದ್ದರೆ ಅವರೇ ಹೊರಗೆ ಬಂದು ಹೇಳುವುದನ್ನು ಹೇಳಿ, ಕೇಳುವುದನ್ನು ಕೇಳಿ ಸೋದರ ಮಾವನಂತೆ

ಅಷ್ಟೇ ವಿನೀತರಾಗಿ ಕ್ಯಾಬಿನೋ ಲಿಪ್ರೋ ಸೇರುತ್ತಿದರು. ಅನಿತಾ ಅವರೇ… ಬಿಲ್ಲವರ ಉದ್ದಾರಕ್ಕೆಂದೇ ಧರೆಗಿಳಿದ ಆ ದೈತ್ಯ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಲಾರಿರಿ ಅನ್ನುವ ನನ್ನ ಊಹೆಗೆ ತಣ್ಣೀರೆರಚಿದ್ದೀರಿ. ಅದಕ್ಕೇ ಸುವರ್ಣ ಯುಗದ ಬಿಡುಗಡೆಯ ದಿನ ನಿಮ್ಮ ನಿಟ್ಟುಸಿರು ಕಪಾಳ ಮೋಕ್ಷ ಮಾಡಿರಬೇಕು. ನೀವು ನಿಜವಾಗಲೂ ತಾಕೊಡೆಯ ತಾಕತ್ತು. ಅಭಿನಂದನೆಗಳು.

-ಮೋಹನ್ ಮಾರ್ನಾಡ್, ಮುಂಬೈ

Leave a Reply

Your email address will not be published. Required fields are marked *