ಗ್ರಾಮ ಉದ್ದಾರವಾದರೆ ನಗರ ಅಭಿವೃದ್ಧಿ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಸಮಾಲೋಚನೆ ಸಭೆಯಲ್ಲಿ ಒಡಿಯೂರು ಶ್ರೀ
ರಾಷ್ಟೋತ್ಥಾನಕ್ಕೆ ರಾಷ್ಟ್ರದ ಸೇವೆ ಮಾಡುವುದು ಅಗತ್ಯ. ರಾಮನ ಸೇವಕನಾಗಿ ಹನುಮಂತ ಮಾಡಿದ ಸೇವೆಯನ್ನು ಮುಂದಿಟ್ಟುಕೊಂಡು ರಾಮರಾಜ್ಯಕ್ಕೆ ಪ್ರಯತ್ನಿಸಬೇಕು. ರಾಮ ರಾಜ್ಯ ಗ್ರಾಮಸ್ವರಾಜ್ಯದಿಂದ ದೇಶ ಸುಭಿಕ್ಷವಾಗುತ್ತದೆ.– ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ
ನಗರದ ಬೇರು ಹಳ್ಳಿಯಲ್ಲಿದೆ. ಗ್ರಾಮಗಳ ಉದ್ಧಾರ ಆದರೆ ನಗರದಲ್ಲಿ ಕೂಡ ಅಭಿವೃದ್ಧಿ ಆಗುತ್ತದೆ. ಗ್ರಾಮೋತ್ಸವ ಮೂಲಕ ಸೇವಾ ಕಾರ್ಯ ಮಾಡಿದಾಗ ಸಂತೃಪ್ತಿ ಸಿಗುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಆ.8ರಂದು ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ, ಗುರುವಂದನೆ ಸೇವಾ ಸಂಭ್ರಮದ ಪ್ರಯುಕ್ತ ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಶುಕ್ರ ವಾರ ನಡೆದ ಸಮಾಲೋಚನೆ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ಸಂತನು ಸಮಾಜಮುಖಿಯಾಗಿ ಮಾರ್ಗದರ್ಶನ ನೀಡ ಬೇಕು ಎಂದ ಅವರು, ಅಹಂಕಾರ ರಹಿತ ಕರ್ಮ ಮಾಡಿ ದಾಗ ಭವಿಷ್ಯದಲ್ಲಿ ಜಯ ಸಿಗುತ್ತದೆ. ಕಲ್ಮಶವಿಲ್ಲದ ಸೇವೆ ಯಿಂದ ಸಂತೃಪ್ತಿ ಪ್ರಾಪ್ತವಾಗುತ್ತದೆ ಎಂದರು.
ಸಾದ್ವಿ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು. ಕಳೆದ ವರ್ಷದ ಗ್ರಾಮೋತ್ಸವ ಸಮಿತಿಯ ಪದಾಧಿಕಾರಿ ಗಳಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸಹಕಾರ ರತ್ನ ಎ. ಸುರೇಶ್ ರೈ, ಕೃಷ್ಣ ಶೆಟ್ಟಿ ತಾರೇಮಾರ್, ಕದ್ರಿ ನವನೀತ ಶೆಟ್ಟಿ ಸೇರಾಜೆ ಗಣಪತಿ ಭಟ್, ವಿಶ್ವನಾಥ ಶೆಟ್ಟಿ ವೆಂಕಟ ರಮಣ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ನೂತನ ಸಮಿತಿ ರಚಿಸಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.
ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸ ಲಾಯಿತು. ಗ್ರಾಮೋತ್ಸವಕ್ಕೆ ಪೂರಕವಾಗಿ ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಆಟಗಳು, ಆರೋಗ್ಯ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಸಂಯೋಜಿಸಲು ನಿರ್ಧರಿಸಲಾಯಿತು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಪ್ರಾರ್ಥನೆ ಹಾಡಿದರು. ಒಡಿಯೂರು ಗ್ರಾಮಾಭಿವೃದ್ಧಿಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ ಭಂಡಾರಿ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.